Saturday, September 12, 2020

                                ಕನಸು 
ನನ್ನ ಮನಸ ಕದ್ದಳೊಬ್ಬಳು ಚೆಲುವೆ
ತನ್ನ ಮನಸ ನೀಡಿದಳು  ಇನ್ನೊಬ್ಬ ಚೆಲುವೆ 

ನನ್ನ ಪ್ರೀತಿಯ ಅತ್ತೆ ಮಗಳೆಂದಳು   
ಏನಾದರಾಗಲಿ ನೀ ಎಂದೆಂಗಿಗೂ ನನ್ನ ಒಲವೇ 

ಅದೇಕೋ ಅದ್ಹೇಗೋ ಎಲ್ಲರೂ ಮದುವೆಯಾಗಲು
ಒಪ್ಪಿದರು ಸ್ವಲ್ಪವೂ ತೆಗೆಯದೆ ರಗಳೆ 

ಮೂವರ ಕೂಡಿ ಸಪ್ತಪದಿ ತುಳಿಯುತ್ತಾ ಬೀಗಿದೆ
ನನ್ನದು ಈ ಶತಮಾನದಲ್ಲೇ ಜರುಗಿದ ಅಪರೂಪದ  ಮದುವೆ 

ಇದ್ದಕ್ಕಿದ್ದಂತೆ ತನು ಮನವೆಲ್ಲ ನೀರಿನಲ್ಲಿ ತೊಯ್ದಂತಾಯಿತು 
ನಾ ಅಂದು ಕೊಂಡೆ ಇದು ಮುಂಗಾರು ಮಳೆಯೇ 

ಅಷ್ಟರಲ್ಲಿ ಲತ್ತೆ ಬಿದ್ದ ನೋವಿಗೆ ಕಣ್ಣು ಬಿಟ್ಟು ನೋಡಿದರೆ  
ಬಿಂದಿಗೆಹಿಡಿದಿದ್ದ ಅಮ್ಮನೆಂದಳು  ಎಕ್ಸಾಮ್ಗೆ ಲೇಟ್ ಆಯ್ತು ರೆಡಿ ಆಗೋ ಮಗುವೇ!

ಕಂಡಿದೆಲ್ಲಾ ಕನಸೆಂದು ತಿಳಿದು  ದಿಗ್ಭ್ರಮೆಗೊಂಡು ಯೋಚಿಸಿದೆ  
ಅಯ್ಯೋ ಮನವೇ ಈ ಪರಿ  ಕನಸು ಕಾಣುವುದು ಥರವೇ !

     ಪೆಚ್ಚು ನಗೆ 

ನಾ ಅಂದು ಬಸ್ ನಿಲ್ದಾಣದಲ್ಲಿ ನಿಂತಿದ್ದೆ 
ಕಾಲೇಜಿಗೆ ಹೋಗಲೆಂದು !
ಮಿಂಚ್ ಒಂದು ಸುಳಿದಂತಾಯಿತು ತಿರುಗಿ ನೋಡಿದಾಗ 
ತಿಳಿಯಿತು ಬೆಳದಿಂಗಳ ಬಾಲೆಯಂತಿದ್ದವಳು ನಕ್ಕಳೆಂದು !
ಆ ಮಿಂಚಿನ ಸಂಚಿಗೆ ಸಿಲುಕಿ ಬೇಡದ ಧೈರ್ಯದಲಿ 
ನಾ ಹೋಗಿ ಅವಳಿಗಂದೆ ನನಗೆ ಪ್ರೇಮಾಂಕುರವಾಗಿದೆಯೆಂದು!
ಅಷ್ಟರಲ್ಲಿ ಅವಳ ಪಕ್ಕದಲ್ಲಿದ್ದ ಪೈಲ್ವಾನನಂತವನೊಬ್ಬ 
ಕಣ್ಣು ಕಿರಿದು ಮಾಡಿ ಬಿಗಿದ ನನ್ನ ಎಡ ಕಪೋಲಕ್ಕೊಂದು!
ದವಡೆ ಅದುರಿರಲು ಬಸ್ಸು ಬಂದಿರಲು ಹೇಗೋ ಹತ್ತಿ 
ಕೆನ್ನೆ ಮೇಲೆ ಕೈ ಇಟ್ಟು ಮುದುಡಿ ಕುಳಿತೆ ಸೀಟೊಂದನ್ನು ಹುಡುಕಿಕೊಂಡು!
ಪಕ್ಕದಲ್ಲಿ ಬಂದು ಕೂತ ಪುಟ್ಟ ಹುಡುಗಿಯೊಂದು ನನ್ನ ನೋಡಿ ಕೇಳಿತು 
ಏನಾಯಿತು ಅಂಕಲ್ ಹಲ್ಲು ನೋವೆ ನಿಮ್ಮ ಟೂತ್ಪೇಸ್ಟ್ ಲ್ಲಿ ಉಪ್ಪಿದೆಯೇ ಎಂದು !
ಆ ಹುಡುಗಿಯ ಮಾತು ಕೇಳಿ ಅಳಬೇಕೊ ನಗಬೇಕೋ ತಿಳಿಯದೆ 
ಬೀರಿದೆ ನಾನೊಂದು ಪೆಚ್ಚು ನಗೆಯೊಂದನ್ನು !


 

ನಂಬಿಕೆ 

ಕಾಡುವ ಕನಸುಗಳ
ಬೆನ್ನಟ್ಟಿ ಹೊರಟಿರುವೆ !
ಭರವಸೆಯ ಕಂದೀಲ 
ಮನಸಲ್ಲಿ ಹಚ್ಚಿರುವೆ !
ಏಳಿರಲಿ ಬೀಳಿರಲಿ
ಕುಗ್ಗದೆಯೆ ನಡೆದಿರುವೆ !
ದರಿ ಇರಲಿ ಪುಲಿ ಇರಲಿ
ಧೈರ್ಯದಲಿ ಮುನ್ನೆಡೆವೆ!
ಕೃಪೆತೋರು ಭಗವಂತ 
ಸದಾ ನಿನ್ನನ್ನೆ ನಂಬಿರುವೆ !

 

 

Sunday, June 14, 2020

ತೋಚಿದ್ದು ಗೀಚಿದ್ದು ...!


ಹಾಡುವ ಹಕ್ಕಿಗೆಲ್ಲಿದೆ 
ಕೇಳುಗರ ಚಿಂತೆ !
ಬೀಸುವ ಗಾಳಿಗೆಲ್ಲಿದೆ
ದಿಕ್ಕುಗಳ ಚಿಂತೆ !
ಹರಿವ ನದಿಗೆಲ್ಲಿದೆ
ಏಳು ಬೀಳುಗಳ ಚಿಂತೆ !
ಸುರಿವ ಮಳೆಗೆಲ್ಲಿದೆ
ಕಲ್ಲು ಮುಳ್ಳುಗಳ ಚಿಂತೆ !
ಚಿತ್ತಾರದ ಕಾಮನಬಿಲ್ಲಿಗೆಲ್ಲಿದೆ
ನೋಡುಗರ ಚಿಂತೆ !
ನಮ್ಮ ಕೆಲಸ ನಾವು ಮಾಡಿದರೆ ಸಾಕು
ನಮಗೇಕೆ ಫಲದ ಚಿಂತೆ !
ಏನೆ ಆದರೂ ಎಲ್ಲದಕೂ ಕಾರಣವು
ಒಂದು ಕಾಣದ ಶಕ್ತಿಯಂತೆ !

ಭಾನುವಾರದ ಶುಭೋದಯ/ಶುಭರಾತ್ರಿ!

Friday, April 24, 2020

ತೋಚಿದ್ದು ಗೀಚಿದ್ದು ...!

ಒಮ್ಮೆಯಾದರೂ 


ಮುಚ್ಚಿಟ್ಟ ಬದುಕಿನ ಪುಟಗಳಲಿ
ಬಚ್ಚಿಟ್ಟ ನೆನಪುಗಳ ನವಿಲುಗರಿಯ
ಒಮ್ಮೆಯಾದರೂ ತೆಗೆದು ನೋಡಬಾರದೇ !

ಮುಂಜಾನೆ ಬೇಗೆದ್ದು ಚುಮು ಚುಮು ಛಳಿಯಲ್ಲಿ
ಆಗ ತಾನೇ ಧರೆಗಿಳಿಯುತ್ತಿರುವ ರವಿಕಿರಣಗಳಿಗೆ
ಒಮ್ಮೆಯಾದರೂ ಮೈಯನ್ನು ಒಡ್ಡಬಾರದೆ!

ಮನ ಹಿಡಿದವರ ಕೈ ಹಿಡಿದು
ಹಾಗೇ ಆರಾಮಾಗಿ ಹರಟುತ್ತಾ
ಒಮ್ಮೆಯಾದರೂ ಒಂದು ನಾಲ್ಕು ಹೆಜ್ಜೆ ಜೊತೆಗೆ ನಡೆಯಬಾರದೇ !

ಅಮ್ಮನ ಮಡಿಲಲ್ಲಿ ತಲೆಯಿಟ್ಟು
ಮೈಮರೆತು ಒಮ್ಮೆಯಾದರೂ
ಒಂದು ಸಣ್ಣ ನಿದ್ದೆಯನ್ನು ತೆಗೆಯಬಾರದೇ !

ಇಷ್ಟವಾದ ಹಾಡೊಂದನ್ನು ಗುನುಗುತ್ತಾ
ಬೇಕಾದ ತಿನಿಸೊಂದನ್ನು ಮೇಯುತ್ತಾ
ಒಮ್ಮೆಯಾದರೂ ಹಾಗೆ ಕಾಲುಚಾಚಿ ಗೋಡೆಗೊರಗಬಾರದೇ !

ಹಿಡಿದ ಪುಸ್ತಕದ ಗೀಳಿಗೆ
ಹಬೆಯಾಡುತ್ತಿರುವ ಕಾಫಿ ಕೂಡ
ಒಮ್ಮೆಯಾದರೂ ಸಣ್ಣಗೆ ಕೆನೆಯನ್ನು ಕಟ್ಟಬಾರದೇ !

ಮನೆಯವರೆಲ್ಲಾ ಜೊತೆಗೂಡಿ ಸಂತಸದಿ
ಅವರಿವರ ಕಾಲೆಳೆದು ಕಿಚಾಯಿಸಿ
ಒಮ್ಮೆಯಾದರೂ ಹೊಟ್ಟೆ ಹುಣ್ಣಾಗುವಷ್ಟು ನಗಬಾರದೇ !

ಪ್ರಕೃತಿಯ ಮಡಿಲಲ್ಲಿ
ಹಕ್ಕಿಗಳ ಕಲರವವ ಸವಿಯುತ್ತಾ
ಒಮ್ಮೆಯಾದರೂ ಒಂದು ಘಳಿಗೆ ಕಳೆಯಬಾರದೇ !

ಎಷ್ಟಾದರೂ ಕೆಲಸವಿರಲಿ
ಎಷ್ಟಾದರೂ ಬೇಸರವಿರಲಿ
ಒಮ್ಮೆಯಾದರೂ ದಿನದಲ್ಲಿ ನಗಬಾರದೇ !

ಏನಾದರೂ ಬರಲಿ ಹೇಗಾದರೂ ಇರಲಿ
ಈ ಜೀವನವನ್ನ ಒಮ್ಮೆಯಾದರೂ
ಪೂರ್ತಿ ಅನುಭವಿಸಿಬಿಡಬಾರದೇ !

Monday, December 16, 2019

ತೋಚಿದ್ದು ಗೀಚಿದ್ದು ...!

ತಣ್ಣಗೆ ಕೊರೆಯುತ್ತಿರುವ ಚಳಿಗೆ 
ಘಡ ಘಡನೆ ನಡುಗುತ್ತಿದೆ ಎಲೆಗಳು !
ತಂಪಾಗಿ ಬೀಸುತ್ತಿರುವ ಗಾಳಿಗೆ 
ನಾದ ಹೊರಡಿಸುತ್ತಿದೆ ಗಾಳಿ ಘಂಟೆಗಳು !
ಆ ನಾದದ ಇಂಪಾದ ತಾಳಕ್ಕೆ 
ಹೆಜ್ಜೆ ಹಾಕುತ್ತಿವೆ ರೆಂಬೆ ಕೊಂಬೆಗಳು !
ಬೆಳಗಿನ ಈ ಸೊಬಗನ್ನು ಸವಿಯುತ್ತಾ 
ನಾ ಬಾಲ್ಕನಿಯಲ್ಲಿ ನಿಂತಿರಲು !
ನನ್ನಾಕೆ ಪ್ರೀತಿಯಲಿ ಕೊಟ್ಟ ಬಿಸಿ ಬಿಸಿ ಕಾಫಿ 
ನನ್ನ ತುಟಿಯನ್ನು ಸ್ಪರ್ಶಿಸಲು !
ಮೈ ಮನಗಳಲ್ಲಿ ಹರಡುತ್ತಿದೆ 
ಬೆಚ್ಚಗಿನ ಶಾಖದ ತರಂಗಗಳು  !


Monday, January 14, 2019

ತೋಚಿದ್ದು ಗೀಚಿದ್ದು ...!

ವಿಶ್ವಚಕ್ಷುವು ಪಥ ಬದಲಿಸಿರಲು
ಸುಗ್ಗಿ ಕಾಲವು ಮೂಡಿದೆ
ಆ ಹೊಸ ರವಿಕಿರಣಗಳು ಸ್ಪರ್ಶಿಸಲು
ನವ ಚೈತನ್ಯವು ತುಂಬಿದೆ
ಮಾಘ ಮಾಸದ ಉತ್ತರಾಯಣಕೆ
ಸಂತಸ ಸಂಭ್ರಮ ಮನೆ ಮಾಡಿದೆ
ಹುಗ್ಗಿಯ ಸಿಹಿಯು ಎಳ್ಳು-ಬೆಲ್ಲದ ಸವಿಯು
ಮೈ ಮನಗಳಲ್ಲಿ ಪಸರಿಸಿದೆ
ಕಹಿ ನೆನಪುಗಳಿಗೆ ಕಿಚ್ಚು ಹಚ್ಚಿ
ಹೊಸ ಕನಸುಗಳ ರೆಕ್ಕೆ ಬಿಚ್ಚಿ
ಗೆಲುವಿನಾಗಸದಲಿ ಹಾರೋಣ
ಸಡಗರ ಸಂತಸದಲಿ ಸಂಕ್ರಾಂತಿಯನ್ನಾಚರಿಸೋಣ !

ನಿಮಗೂ ಹಾಗೂ ನಿಮ್ಮ ಮನೆಯವರಿಗೆಲ್ಲರಿಗೂ ಮಕರ ಸಂಕ್ರಮಣದ ಹಾರ್ಧಿಕ ಶುಭಾಷಯಗಳು...!


ವಿನಯ್ ಎಸ್